Tuesday 14 January 2020

ವಿಟಮಿನ್ ಸೊಪ್ಪು(ಚಕ್ರಮುನಿ  ಸೊಪ್ಪು ) ತಂಬ್ಳಿ .

ವಿಟಮಿನ್ ಸೊಪ್ಪು ಉಡುಪಿ ,ದಕ್ಷಿಣ  ಕನ್ನಡದಲ್ಲಿ  ಸಾಮಾನ್ಯವಾಗಿ ಕಂಡುಬರುವ ಒಂದು ಸೊಪ್ಪು . ಹೆಸರೇ ಹೇಳುವಂತೆ ಇದು ವಿಟಮಿನ್ಗಳ  ಆಗರ . ಮಕ್ಕಳಿಗಂತೂ ಇದರ ಬಣ್ಣವೇ ಆಕರ್ಷಕ . ಹಸಿರು ತಂಬ್ಳಿ ಎಂದು ತುಂಬಾ ಇಷ್ಟ ಪಟ್ಟು ತಿನ್ನುವರು . ಈ  ರುಚಿಕರ  ಹಾಗೂ ಸತ್ವಭರಿತ  ತಂಬ್ಳಿ  ಮಾಡುವ ವಿಧಾನ ಕೆಳಗೆ ವಿವರಿಸಿದ್ದೇನೆ .

ಮಾಡಲು ಬೇಕಾಗುವ ಸಾಮಗ್ರಿಗಳು .

ವಿಟಮಿನ್ ಸೊಪ್ಪು-- ೧ ಹಿಡಿ
ಜೀರಿಗೆ --೧ ಚಮಚ
ಕಾಳು ಮೆಣಸು --೮-೧೦ ಕಾಳು
ಹಸಿ ಮೆಣಸು --೨
ಎಣ್ಣೆ --ಸ್ವಲ್ಪ
ಉಪ್ಪು --ರುಚಿಗೆ ತಕ್ಕಷ್ಟು
ತೆಂಗಿನ ತುರಿ --೧ ಕಪ್
ಮೊಸರು --೧ ಕಪ್

ಒಗ್ಗರೆಣೆಗೆ :
ಸಾಸಿವೆ --೧/೨ ಚಮಚ
ತುಪ್ಪ --೧ ಚಮಚ
ಕೆಂಪು ಮೆಣಸು --೧

ಮಾಡುವ ವಿಧಾನ :
ವಿಟಮಿನ್ ಸೊಪ್ಪಿನ ಎಲೆಗಳನ್ನು  ಗರಿಯಿಂದ ಬೇರ್ಪಡಿಸಿ ಚೆನ್ನಾಗಿ ತೊಳೆಯಬೇಕು . ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಮತ್ತು ತೊಳೆದ ಎಲೆಗಳನ್ನು ಹಾಕಿ ಅರ್ಧ ಬಾಡಿಸಬೇಕು . ನಂತರ ಜೀರಿಗೆ,ಕಾಳುಮೆಣಸು,ಹಸಿಮೆಣಸು ಹಾಕಿ ಸೊಪ್ಪು ಚೆನ್ನಾಗಿ ಬಾಡುವವರೆಗೂ ಹುರಿಯಬೇಕು. ಸೊಪ್ಪು ಚೆನ್ನಾಗಿ ಬಾಡಿಸದಿದ್ದರೆ ಹಸಿ ವಾಸನೆ ಚೆನ್ನಾಗಿ ಇರುವುದಿಲ್ಲ . ಹಸಿಮೆಣಸಿನ ಬದಲು ಒಣ ಮೆಣಸು ಸಹ ಬಳಸಬಹುದು. ಹಸಿರು ಬಣ್ಣ ಉಳಿಯುವುದಕ್ಕಾಗಿ ಹಸಿ ಮೆಣಸು ಬಳಸಿದ್ದೇನೆ . ಹುರಿದ ಮಿಶ್ರಣ ತಣ್ಣಗಾದ ನಂತರ ತೆಂಗಿನಕಾಯಿ ,ಮೊಸರು ಜೊತೆಗೆ ಚೆನ್ನಾಗಿ ನುಣ್ಣಗಾಗುವ ತನಕ ರುಬ್ಬಬೇಕು . ಈಗ ಕೊನೆಯದಾಗಿ ಒಗ್ಗರೆಣೆಗೆ ಮೇಲೆ ಹೇಳಿದ ಸಾಮಗ್ರಿ ಬಳಸಿದ್ರೆ ಅಲ್ಲಿಗೆ ರುಚಿ ರುಚಿಯಾದ ಮತ್ತು ಆರೋಗ್ಯಕರವಾದ ತಂಬ್ಳಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ಸಿದ್ದ.

ನೀವು ತಯಾರಿಸಿ ಸವಿಯಿರಿ ಹಾಗು ಇತರರಿಗೂ ಇದರ ಸವಿ ಉಣಬಡಿಸಿ. ಎಲ್ಲರ ಮೆಚ್ಚುಗೆ ಪಡೆಯೋದು ಖಂಡಿತ .. ಮಕ್ಕಳಿಗಂತೂ ಇದರ ಬಣ್ಣವೇ ಬಲು ಆಕರ್ಷಣೀಯ .

ಈಗ ಫೋಟೋ ತೆಗೆದದ್ದು ಇಲ್ಲ.. ಯಾವಾಗಲಾದ್ರೂ ತೆಗೆದಾಗ ಇಲ್ಲಿ ಸೇರಿಸುತ್ತೇನೆ.

Wednesday 8 January 2020

ಎಲ್ಲರಿಗೂ ನಮಸ್ಕಾರ ....

ನನ್ನ  ಅಡುಗೆ ಮನೆಯಲ್ಲಿ ನಡೆಯುವ ಪ್ರತಿಯೊಂದು ಅಡುಗೆಗೂ ಒಂದು ಬರಹ ರೂಪ ಕೊಡುವ ಚಿಕ್ಕ  ಪ್ರಯತ್ನ ಮಾಡುತ್ತಿದ್ದೇನೆ. ನಿಮ್ಮ ಪ್ರೋತ್ಸಾಹ ಹೆಚ್ಚೆಚ್ಚು ಬರೆಯಲು ತುಂಬಾ ಮುಖ್ಯ . ಸಹಕರಿಸುವಿರಿ  ಎಂಬ ನಂಬಿಕೆ .